ನನ್ನ ವೃತ್ತಿ ಜೀವನದಲ್ಲಿ ನಾನು ನೂರಾರು ನಟರನ್ನು ನೋಡಿದ್ದೇನೆ, ಮಾತನಾಡಿದ್ದೇನೆ. ಅವರಲ್ಲಿ ಅರ್ಧದಷ್ಟು ಮಂದಿಯ ಜೊತೆ ಗೆಳೆತನವೂ ನನಗಿದೆ. ಆದರೆ ಎಷ್ಟೋ ಮಂದಿಯ ಜತೆ ಎಷ್ಟು ಹೊತ್ತು ಮಾತನಾಡಿದರೂ ಅಮೂಲ್ಯವಾದದ್ದೇನೂ ನಮಗೆ ಸಿಕ್ಕಿರುವುದಿಲ್ಲ. ನಮ್ಮ ಅನುಭವ ಪ್ರಪಂಚ ಕಿಂಚಿತ್ತೂ ಶ್ರೀಮಂತಗೊಂಡಿರುವುದಿಲ್ಲ. ಆಡಿದ ಮಾತು ಕೆಲಹೊತ್ತಿಗೇ ಮರೆತೂ ಹೋಗಿರುತ್ತದೆ. ರಮೇಶ್ ಅರವಿಂದ್ ಜತೆಗಿನ ಒಂದೊಂದು ಭೇಟಿಯೂ ಅವಿಸ್ಮರಣೀಯ. ತನ್ನ ಜತೆ ಮಾತಾಡುವ ಎಲ್ಲರಿಗೂ ಅವರ ಪೂರ್ತಿ ವ್ಯಕ್ತಿತ್ವವನ್ನು ಅವರು ಕೊಟ್ಟುಬಿಡುತ್ತಾರೆ. ಅವರ ಅಂತರಂಗದ ಸುದ್ದಿಯನ್ನು ನಮಗೆ ದಾಟಿಸುತ್ತಾರೆ. ಅವರ ಪಾಸಿಟಿವ್ ಎನರ್ಜಿಯನ್ನು ನಮ್ಮ ಜೀವಕ್ಕೂ ಹಾಯಿಸುತ್ತಾರೆ. ಕಡುಸಂಕಟದ, ನಿರಾಸಕ್ತಿಯ, ಪರನಿಂದೆಯ, ಪೊಳ್ಳು ಮಾತುಗಳನ್ನು ಅವರು ಆಡಿದ್ದನ್ನು ನಾನು ಕೇಳಿಯೇ ಇ... See more
ನನ್ನ ವೃತ್ತಿ ಜೀವನದಲ್ಲಿ ನಾನು ನೂರಾರು ನಟರನ್ನು ನೋಡಿದ್ದೇನೆ, ಮಾತನಾಡಿದ್ದೇನೆ. ಅವರಲ್ಲಿ ಅರ್ಧದಷ್ಟು ಮಂದಿಯ ಜೊತೆ ಗೆಳೆತನವೂ ನನಗಿದೆ. ಆದರೆ ಎಷ್ಟೋ ಮಂದಿಯ ಜತೆ ಎಷ್ಟು ಹೊತ್ತು ಮಾತನಾಡಿದರೂ ಅಮೂಲ್ಯವಾದದ್ದೇನೂ ನಮಗೆ ಸಿಕ್ಕಿರುವುದಿಲ್ಲ. ನಮ್ಮ ಅನುಭವ ಪ್ರಪಂಚ ಕಿಂಚಿತ್ತೂ ಶ್ರೀಮಂತಗೊಂಡಿರುವುದಿಲ್ಲ. ಆಡಿದ ಮಾತು ಕೆಲಹೊತ್ತಿಗೇ ಮರೆತೂ ಹೋಗಿರುತ್ತದೆ. ರಮೇಶ್ ಅರವಿಂದ್ ಜತೆಗಿನ ಒಂದೊಂದು ಭೇಟಿಯೂ ಅವಿಸ್ಮರಣೀಯ. ತನ್ನ ಜತೆ ಮಾತಾಡುವ ಎಲ್ಲರಿಗೂ ಅವರ ಪೂರ್ತಿ ವ್ಯಕ್ತಿತ್ವವನ್ನು ಅವರು ಕೊಟ್ಟುಬಿಡುತ್ತಾರೆ. ಅವರ ಅಂತರಂಗದ ಸುದ್ದಿಯನ್ನು ನಮಗೆ ದಾಟಿಸುತ್ತಾರೆ. ಅವರ ಪಾಸಿಟಿವ್ ಎನರ್ಜಿಯನ್ನು ನಮ್ಮ ಜೀವಕ್ಕೂ ಹಾಯಿಸುತ್ತಾರೆ. ಕಡುಸಂಕಟದ, ನಿರಾಸಕ್ತಿಯ, ಪರನಿಂದೆಯ, ಪೊಳ್ಳು ಮಾತುಗಳನ್ನು ಅವರು ಆಡಿದ್ದನ್ನು ನಾನು ಕೇಳಿಯೇ ಇಲ್ಲ. ನಗುವಿಲ್ಲದ ರಮೇಶ್ ಅರವಿಂದ್ ಮುಖವನ್ನು ಕಂಡದ್ದೂ ಇಲ್ಲ. ನಟನೆಯ ಜತೆಗೇ ಕತೆ ಹೇಳುವ, ಪ್ರತಿ ಕತೆಯೂ ಕೇಳುಗನಿಗೆ ಕನೆಕ್ಟ್ ಆಗುವಂತೆ ಮಾಡುವ, ಆ ಕನೆಕ್ಷನ್ ನಮ್ಮಲ್ಲಿ ಉಳಿದು ಬೆಳೆದು ನಮ್ಮ ಅನುಭವವೇ ಆಗಿಬಿಡುವಂತೆ ಮಾತಾಡುವ, ಬರೆಯುವ ರಮೇಶ್ ಅರವಿಂದ್ ಪ್ರೀತಿಯಿಂದ ಆಡಿದ ಮಾತುಗಳ ಸಂಗ್ರಹ ಇಲ್ಲಿದೆ. ಇದಕ್ಕೆ ಸೂರ್ತಿಯಿಂದ ರಮೇಶ್, ಖುಷಿಯಿಂದ ರಮೇಶ್, ಉಲ್ಲಾಸದಿಂದ ರಮೇಶ್- ಅಂತಲೂ ಹೆಸರಿಡಬಹುದು. ಇಲ್ಲಿನ ಪ್ರತಿಯೊಂದು ಬರಹವೂ ಸೂರ್ತಿಯ ಕಿಡಿ. ಒಂದು ಹಿಡಿ ಹುರುಪು. ಒಂದೊಳ್ಳೇ ಮುಂಜಾನೆ ವಾಕಿಂಗ್ ಹೊರಟಾಗ ನಮಗೇ ಆಗುವ ಜ್ಞಾನೋದಯ. -ಜೋಗಿ